Monday, January 5, 2009

ಅಮೃತ ಸಿರಿಗೆ ಪರ್ಯಾಯದ ಗುಮ್ಮ

Posted by Da.Ko.Halli Chandrashekara

ದ.ಕೋ.ಹಳ್ಳಿ ಚಂದ್ರಶೇಖರ, ವಿಕ ಸುದ್ದಿಲೋಕ
ಚಿತ್ರದುರ್ಗ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಈ ಬಾರಿಯದು ಅಮೃತ ಮಹೋತ್ಸವದ ವರ್ಷ. ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವುದು ಮತ್ತೊಂದು ಹೆಗ್ಗಳಿಕೆ. ಹಲವು ವಿರೋಧಾಭಾಸಗಳನ್ನು ಮೆಟ್ಟಿ ಸ್ಮರಣೀಯವಾಗಬೇಕಾಗಿರುವುದೇ ಅದರ ಮುಂದಿರುವ ಸವಾಲು.
ಭದ್ರೆಗಾಗಿ ಭಗೀರಥ ಪ್ರಯತ್ನ ನಡೆಸುತ್ತಿರುವ ಜಿಲ್ಲೆಯ ಜನರಿಗೆ ಸಮ್ಮೇಳನದ ಆತಿಥ್ಯ ದೊರೆತಿರುವುದು ಭದ್ರೆ ಹರಿದಷ್ಟೇ ಸಂತಸವಾಗಿದೆ. ಆದರೆ,ಕಾಡಿ ಬೇಡಿ ಸಮ್ಮೇಳನದ ಸಿದ್ಧತೆಯಲ್ಲಿರುವಾಗಲೇ ಪರ್ಯಾಯ ಸಮ್ಮೇಳನದ ಹೊಗೆಯಾಡುತ್ತಿರುವುದು ಕನ್ನಡಾಭಿಮಾನಿಗಳಿಗೆ ನಿರಾಶೆ ಹಾಗೂ ಸಂಘಟಕರನ್ನು ಪೇಚಿಗೆ ಸಿಲುಕಿದೆ. ಇದಕ್ಕೂ ಮೊದಲು ಮೂಲಸೌಕರ್ಯದ ಗರ ಬಡಿದಿತ್ತು.
ಕನ್ನಡ ಸಾಹಿತ್ಯ ಪರಿಷತ್‌ಗೆ ಈ ವರ್ಷವೇ ಚುನಾವಣೆ ನಡೆದಿದ್ದರಿಂದ ಪರಿಷತ್‌ನ ಕೇಂದ್ರಾಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಹಾಗೂ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್‌ಗೆ ಸಮ್ಮೇಳನ ಸಂಘಟನೆ ಹೊಸತು. ಹಾಗಾಗಿಯೇ ಈ ಇಬ್ಬರು ಅಧ್ಯಕ್ಷರ ನಿಲುವು ನಿರ್ಧಾರ, ಹೇಳಿಕೆಗಳು ವಿವಾದಕ್ಕೆಡೆ ಮಾಡಿಕೊಟ್ಟಿವೆ. ಕನ್ನಡದ ತೇರು ನಿರ್ವಿಘ್ನವಾಗಿ ಎಳೆಯಲು ತುಸು ಅಡಚಣೆಯಾಗಿದೆ. ಬಗೆಹರಿಸಿಕೊಳ್ಳಲು ಕಾಲ ಮಿಂಚಿಲ್ಲ ಎಂಬುದೇ ಆಶಾದಾಯಕ ಅಂಶ.
ಏನೇ ಆಗಲಿ, ಜನವರಿ ೨೯ ರಿಂದ ನಾಲ್ಕು ದಿವಸ ಸಮ್ಮೇಳನ ನಡೆಯುವುದಂತೂ ಶತಃಸಿದ್ಧ. ಹೇಗೋ ನಡೆಯುತ್ತೆ ಎನ್ನುವುದು ಮುಖ್ಯವಲ್ಲ. ಹೀಗೇ ನಡೆಯಬೇಕು ಎಂದು ಕನ್ನಡಿಗರೆಲ್ಲರೂ ಸಂಕಲ್ಪ ಮಾಡಬೇಕಿದೆ. ಇದೇ ವರ್ಷ ಕನ್ನಡಕ್ಕೆ ಶಾಸ್ತ್ರೀಯ (ರಾಷ್ಟ್ರೀಯ) ಸ್ಥಾನಮಾನ ದೊರೆತಿರುವುದು, ಅಮೃತ ಮಹೋತ್ಸವದ ಸಂಖ್ಯಾಬಲ ಹೊಂದಿರುವುದು, ಬಿಜೆಪಿ ಹೊಸದಾಗಿ ಸರಕಾರ ರಚಿಸಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಜನತೆ, ಸಾಹಿತ್ಯ ಲೋಕ ಹೊಸ ಭರವಸೆ, ನಿರೀಕ್ಷೆಗಳನ್ನು ಕಟ್ಟಿಕೊಂಡಿದೆ. ಇದರೊಟ್ಟಿಗೆ ಈ ಬಾರಿಯ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ನಡೆಸಲು ಪ್ರಯತ್ನ ನಡೆದಿದೆ.
ಕಸಾಪ ರಾಜ್ಯಾಧ್ಯಕ್ಷರ ಆಯ್ಕೆಯಾದ ನಂತರ ಪರಿಷತ್‌ಗೆ ಸಮಾನಾಂತರವಾಗಿ ಕರ್ನಾಟಕ ಸಾಹಿತ್ಯ ಪರಿಷತ್ ಹುಟ್ಟಿಕೊಂಡು ಚರ್ಚೆಗೆ ಗ್ರಾಸವಾಯಿತು. ಹೊಸ ಸಂಘಟನೆ ಕನ್ನಡ ಸಾಹಿತ್ಯ ಪರಿಷತ್‌ಗೆ ಪರ್ಯಾಯ, ಪರ್ಯಾಯವಾಗಬಾರದು ಎಂಬುದು ಬಲವಾಗಿ ಚರ್ಚೆಯಾಯಿತು. ಸಮ್ಮೇಳನದ ವಿಷಯದಲ್ಲೂ ಪರ್ಯಾಯ ಗುಮ್ಮ ಸುಳಿದಾಡುತ್ತಿದೆ. ಶೋಷಿತರಿಗೆ ಅಧ್ಯಕ್ಷರ ಪಟ್ಟ ನೀಡದ ಕಾರಣಕ್ಕೆ ಪರ್ಯಾಯ ಸಮ್ಮೇಳನ ಆಯೋಜಿಸುವುದಾಗಿ ಚಿತ್ರದುರ್ಗದ ಅಹಿಂದ ಆರಂಭದಲ್ಲಿ ಹೇಳಿಕೊಂಡಿತ್ತು. ಪರ್ಯಾಯ ಸಮ್ಮೇಳನ ನಡೆದರೆ ಅಸಮಾಧಾನವಿಲ್ಲ ಎಂಬ ಕಸಾಪ ಜಿಲ್ಲಾಧ್ಯಕ್ಷರ ಹೇಳಿಕೆಯೂ ಮತ್ತೊಂದು ಕಾರಣವಾಗಿದೆ.
ಕನ್ನಡದ ನಾಡು-ನುಡಿ- ಜಲದ ವಿಷಯದಲ್ಲಿ ‘ಭರವಸೆ ಕೊಟ್ಟವನು ಈ(ವೀ)ರ ‘ಭದ್ರ’, ಇಸ್ಕೊಂಡವನು ಕೋಡಂಗಿ’ ಎಂಬಂತಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಪಟ್ಟ ಕಟ್ಟಿದ ಕೇಂದ್ರ ಸರಕಾರ ಇದುವರೆಗೂ ಅಕೃತವಾಗಿ ಘೋಷಿಸಿಲ್ಲ. ಇಂತಹುದೇ ಭರವಸೆಯನ್ನು ರಾಜ್ಯ ಸರಕಾರ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದ ವಿಷಯದಲ್ಲಿ ನೀಡಿದೆ. ಅಡಿಗಲ್ಲು ಕಾರ್ಯಕ್ರಮ ತಿಂಗಳಿಂದ ತಿಂಗಳಿಗೆ ಜಿಗಿಯುತ್ತಿದೆ. ಅದಿರಲಿ, ಅಮೃತ ಸಮ್ಮೇಳನದ ಅದ್ಧೂರಿ ಆಚರಣೆಗೂ ವಿಶೇಷ ನೆರವು ಒದಗಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ, ಸ್ವಾಗತ ಸಮಿತಿ ಅಧ್ಯಕ್ಷ ಜಿ.ಕರುಣಾಕರರೆಡ್ಡಿ ಹೇಳಿದ್ದಾರೆ. ಹಂಪಿ ಉತ್ಸವದಲ್ಲಿ ಹಣದ ಹೊಳೆ ಹರಿಸಿದ ಗಣಿಧಣಿಯ ಮೇಲಂತೂ ಜಿಲ್ಲೆಯ ಜನರು ಅಪಾರ ವಿಶ್ವಾಸ ಹೊಂದಿದ್ದಾರೆ.
ಇಂತಹ ಗಂಭೀರ ಪ್ರಶ್ನೆಗಳ ಸರಮಾಲೆಯನ್ನೇ ಹೆಣೆದುಕೊಂಡು ಸಮ್ಮೇಳನ ಉತ್ತರ ಕಂಡುಕೊಳ್ಳಲು ಕಾಯುತ್ತಿದೆ. ಹಿಂದಿನ ಸಮ್ಮೇಳನದಲ್ಲಿ ಕೈಗೊಂಡು ಕಡತದಲ್ಲಿ ಧೂಳು ತಿನ್ನುತ್ತಿರುವ ನಿರ್ಣಯಗಳು, ರಾಜ್ಯದ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ, ಜಾಗತಿಕ ಸವಾಲುಗಳಿಗೆ ಈ ಮಹೋತ್ಸವದಲ್ಲಿ ಸಮಾಧಾನ ಪಡೆಯಲೇಬೇಕಿದೆ. ಸಾಹಿತ್ಯದ ಕೆಲಸವೇ ಅದಲ್ಲವೇ ? ಅಂದಹಾಗೆ, ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ.ಎಲ್.ಬಸವರಾಜು ಅವರು ಸಮ್ಮೇಳನದಲ್ಲಿ ವ್ಯತ್ಯಾಸವಾಗಬೇಕು ;ಬದಲಾವಣೆಯೂ ಇರಲಿ ಎಂದಿದ್ದಾರೆ.
ನಿಜ. ಚಿತ್ರದುರ್ಗ ಬರದನಾಡು. ಆದರೆ, ಇಲ್ಲಿ ಸಾಹಿತ್ಯ, ಇತಿಹಾಸ, ಪರಂಪರೆಗೆ ಬರವಿಲ್ಲ. ಮಠಮಾನ್ಯಗಳು ಜನರಲ್ಲಿ ಜೀವನ ಪ್ರೀತಿ ತುಂಬಿವೆ. ಸ್ವತಃ ಪ್ರಕೃತಿಯೇ ಕಷ್ಟ ಸಹಿಷ್ಣುತೆಯನ್ನು ಬೋಸಿ ಬದುಕುವುದನ್ನೂ ಕಲಿಸಿದೆ. ಎಲ್ಲರ ಮನಸ್ಸಿಗೆ ಕಚಗುಳಿ ಇಡುವ ಪ್ರೇಕ್ಷಣಿಯ ಸ್ಥಳಗಳು ಜಿಲ್ಲಾದ್ಯಂತ ಇವೆ. ಮೂಲ ಸೌಕರ್ಯದ ವಿಷಯದಲ್ಲಿ ಮೂಗು ಮುರಿಯುವ ಕಾಲವೂ ಇನ್ನು ದೂರಾಗಲಿದೆ. ಸದ್ಯ ನಗರವಂತೂ ಶೃಂಗಾರಗೊಂಡು ಸಾಹಿತ್ಯ ಪ್ರೇಮಿಗಳಿಗೆ ಸುಸ್ವಾಗತ ಹೇಳಲು ಸಜ್ಜಾಗತೊಡಗಿದೆ. ಸಮ್ಮೇಳನದಲ್ಲಿ ಉಚಿತ ಭೋಜನದೊಂದಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೆನಪಿರಲಿ ಮಹಾಜಾತ್ರೆಗೆ ಇನ್ನು ೨೪ ದಿನ ಬಾಕಿ.

0 comments:

Post a Comment