Monday, March 30, 2009

ಲೋಕಸಭೆ ಬಯಲಾಟ / ಚಿತ್ರದುರ್ಗ

Posted by Da.Ko.Halli Chandrashekara

ಎಲ್ಲ ಪಕ್ಷಗಳ ಕಣ್ಣು 'ಎಡಗೈ' ಮೇಲೆ
ಶಿವರಾಜ್ ಬೀದಿಮನಿ
ಚಿತ್ರದುರ್ಗ : ನಿರೀಕ್ಷಿಸಿದಂತೆ ಕಾಂಗ್ರೆಸ್ ಚಿತ್ರದುರ್ಗ ಮೀಸಲು ಕ್ಷೇತ್ರದಲ್ಲಿ ಎಡಗೈ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಘೋಷಿಸಿದೆ. ಈಗಾಗಲೇ ಜೆಡಿಎಸ್, ಬಿಎಸ್ಪಿ ಮಾದಿಗ ಸಮುದಾಯದವರಿಗೇ ಟಿಕೆಟ್ ಘೋಷಿಸಿವೆ. ಕಾಂಗ್ರೆಸ್ ಕೂಡ ಇದೇ ಸಮುದಾಯಕ್ಕೆ ಜೋತು ಬಿದ್ದಿರುವುದು ಅಚ್ಚರಿ ತಂದಿದೆ.
ಇದು ಕಾಂಗ್ರೆಸ್‌ನ ಭದ್ರಕೋಟೆ. ಪಕ್ಷದ ಸಂಸದರನ್ನು ೯ಬಾರಿ ಆಯ್ಕೆ ಮಾಡಿ ಕಳುಹಿಸಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಈ ಸಲ ಎಡವಿದೆ. ಕಣದಲ್ಲಿರುವ ಪ್ರಮುಖ ಪಕ್ಷಗಳ ಮೂವರು ಮಾದಿಗ ಸಮುದಾಯಕ್ಕೆ ಸೇರಿದ್ದು, ಒಂದೂವರೆ ಲಕ್ಷ ಮತಗಳ ಮೇಲೆ ಮೂರೂ ಪಕ್ಷಗಳು ಕಣ್ಣಿಟ್ಟಿವೆ. ಈ ಬಾರಿ ಹೈಕಮಾಂಡ್ ಎಡಗೈಗೆ ಸೇರಿದ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೆಟ್ ಪ್ರಕಟಿಸಿದೆ. ಪರಿಶಿಷ್ಟ ಜಾತಿಯ ಇತರೆ ಸಮುದಾಯಗಳಾದ ಲಂಬಾಣಿ, ಆದಿ ದ್ರಾವಿಡ (ಬಲಗೈ ) ಸಾಮಾಜಿಕ ನ್ಯಾಯದಿಂದ ವಂಚಿತವಾದಂತಾಗಿದೆ. ಈ ಸಮುದಾಯಗಳ ಮತಗಳು ಯಾವ ಪಕ್ಷಗಳ ಪಾಲಾಗುತ್ತವೆ ಎನ್ನುವುದು ಮುಂದಿನ ಪ್ರಶ್ನೆ.
ಸಾಮಾನ್ಯ ಕ್ಷೇತ್ರದಿಂದ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿರುವ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಹೀಗಾಗಿ ಜಾತಿ ಲೆಕ್ಕಾಚಾರದಲ್ಲಿ ಮತ ಗಿಟ್ಟಿಸಿಕೊಳ್ಳಲು ಪಕ್ಷಗಳು ನಾನಾ ಸವಾಲು ಎದುರಿಸಬೇಕಿದೆ.
ಚುನಾವಣಾ ಕಣದಲ್ಲಿರುವ ಬಿಎಸ್ಪಿ ಯ ಎಂ.ಜಯಣ್ಣ, ಜೆಡಿಎಸ್‌ನ ರತ್ನಾಕರ್ ಬಾಬು, ಕಾಂಗ್ರೆಸ್‌ನ ಡಾ.ಬಿ.ತಿಪ್ಪೇಸ್ವಾಮಿ (ಮಾದಿಗ ) ಒಂದೇ ಸಮುದಾಯಕ್ಕೆ ಸೇರಿದವರು. ಸಹಜವಾಗಿ ಈ ಮತಗಳು ಮೂರೂ ಪಕ್ಷಗಳಿಗೆ ಹರಿದು ಹಂಚಲಿವೆ.
ಇನ್ನು ಭೋವಿ ಸಮುದಾಯದ ಬಿಜೆಪಿಯ ಜನಾರ್ದನಸ್ವಾಮಿ, ತಮ್ಮ ಸಮುದಾಯದ ಮತ ಸೆಳೆಯುವಲ್ಲಿ ಸಂದೇಹವಿಲ್ಲ. ಆದರೆ, ಲಂಬಾಣಿ, ಆದಿ ದ್ರಾವಿಡರಿಗೆ ಬಿಎಸ್ಪಿ, ಕಾಂಗ್ರೆಸ್, ಜೆಡಿಎಸ್ ಮಣೆ ಹಾಕದ ಕಾರಣ ಕಮಲ ಅರಳಿ ಬರಲು ದಾರಿ ಸುಗಮವಾಯಿತೇ ?
ರಾಜ್ಯದ ೨೮ ಕ್ಷೇತ್ರಗಳಲ್ಲಿ ಐದು ಮೀಸಲು ಕ್ಷೇತ್ರಗಳಿವೆ. ಇದರಲ್ಲಿ ಮೂರು ಬಲಗೈ ಸಮುದಾಯಕ್ಕೆ, ಉಳಿದೆರಡು ಎಡಗೈ ಆಕಾಂಕ್ಷಿಗಳಿಗೆ ನೀಡಲು ಕಾಂಗ್ರೆಸ್ ಲೆಕ್ಕ ಹಾಕಿತ್ತು. ಅದರಂತೆ ಚಿತ್ರರ್ದುಗದಿಂದ ಡಾ.ತಿಪ್ಪೇಸ್ವಾಮಿ, ಕೋಲಾರದಿಂದ ಕೇಂದ್ರ ಸಚಿವ ಕೆ.ಎಚ್.ಮನಿಯಪ್ಪ ಹೆಸರು ಪ್ರಕಟಿಸಿದೆ.
ಚಿತ್ರದುರ್ಗದಿಂದ ಬಲಗೈ ಸಮುದಾಯದ ಡಾ.ಪರಮೇಶ್ವರ, ಎಡಗೈ ಸಮುದಾಯದ ಡಾ.ತಿಪ್ಪೇಸ್ವಾಮಿ ಹೆಸರು ಕೇಳಿ ಬಂದಿದ್ದವು. ಸಮರ್ಥ ಅಭ್ಯರ್ಥಿಗಾಗಿ ತಡಕಾಡಿ ಕೊನೆಗೂ ಯುಗಾದಿ ಮರು ದಿನ ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟಿಸಿದೆ. ರಾಜ್ಯದಲ್ಲೊಬ್ಬರಿಗೆ ಯುವ ಕೋಟಾದಡಿ ಪಕ್ಷದ ಟಿಕೆಟ್ ನೀಡಬೇಕು ಎನ್ನುವುದು ಕಾಂಗ್ರೆಸ್ ಮಾನದಂಡವಾಗಿತ್ತು.ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ತಿಪ್ಪೇಸ್ವಾಮಿಗೆ ಟಿಕೆಟ್ ಲಭಿಸಿದೆ. ಡಾ.ತಿಪ್ಪೇಸ್ವಾಮಿ, ಜನಾರ್ದನಸ್ವಾಮಿ, ರತ್ನಾಕರ್ ಬಾಬು ಕ್ಷೇತ್ರಕ್ಕೆ ಹೊಸ ಮುಖಗಳು. ಇವರು ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷಗಳ ಮುಖವಾಣಿ ಮೂಲಕವೇ ಮತದಾರನನ್ನು ಎದುರುಗೊಳ್ಳಬೇಕಿದೆ.

0 comments:

Post a Comment