ವರಿಷ್ಠರ ಆಯ್ಕೆಯಲ್ಲೂ ಇದೆ ವರಸೆ
ಮಲ್ಲಿಕಾರ್ಜುನ್ ಕಬ್ಬೂರು
ದಾವಣಗೆರೆ : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಾಲಿಕೆ ಮೇಯರ್ ಆಯ್ಕೆ ನಡೆಯಬೇಕಿದ್ದು, ಬಿಜೆಪಿ ವರಿಷ್ಠರು ಲಾಭನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್‌ನ ದಾರಿಯಲ್ಲೇ ಬಿಜೆಪಿ ಹೆಜ್ಜೆಯಿಡಲಿದೆ. ಜಿಲ್ಲಾ ವರಿಷ್ಠರು ಹೇಳಿದ ಅಭ್ಯರ್ಥಿ ಮೇಯರ್- ಉಪ ಮೇಯರ್ ಗದ್ದುಗೆ ಏರುವುದು ಬಹುತೇಕ ಖಚಿತ. ಹೀಗಾಗಿ ಇದನ್ನು ‘ಈಟ್ ಇಸ್ ಸೆಲೆಕ್ಷನ್ - ನಾಟ್ ಎಲೆಕ್ಷನ್’ ಅಂದರೂ ಅಡ್ಡಿಯಿಲ್ಲ.
ಒಟ್ಟು ೪೧ ಸ್ಥಾನಗಳಲ್ಲಿ ೨೪ ಸದಸ್ಯಬಲ ಹೊಂದಿರುವ ಬಿಜೆಪಿ, ಮೇಯರ್ ಮಾದಮ್ಮ ಮುನಿಸ್ವಾಮಿ, ಉಪ ಮೇಯರ್ ಜಯಣ್ಣ ನೇತೃತ್ವದಲ್ಲಿ ಒಂದು ವರ್ಷದ ಆಡಳಿತ ಪೂರೈಸಿದೆ. ಬಿಸಿಎಂ(ಎ) ಮಹಿಳೆ ಮೇಯರ್ ಹಾಗೂ ಉಪಮೇಯರ್ ಸಾಮಾನ್ಯಕ್ಕೆ ಮೀಸಲು ನಿಗದಿಯಾಗಿದ್ದು, ಫೆ.೨೭ ರಂದು ಬೆಳಗ್ಗೆ ೧೦ಕ್ಕೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಚುನಾವಣೆ ನೆಪಮಾತ್ರಕ್ಕೆ ಎಂಬಂತಾಗಲಿದೆ.
ಮೇಯರ್ ಅಭ್ಯರ್ಥಿ ಆಯ್ಕೆ ಲೋಕಸಭೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದೆಂಬ ಎಚ್ಚರಿಕೆಯನ್ನು ವರಿಷ್ಠರು ವಹಿಸಿದ್ದಾರೆ. ಈಗ ನಿಗದಿಯಾದ ಮೀಸಲು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಸರಕಾರ ತಮ್ಮದೇ ಆದರೂ ಹಿಂದುಳಿದ ವರ್ಗದ ಮತ ಸೆಳೆಯುವ ದೃಷ್ಟಿಯಿಂದ ಸಾಮಾನ್ಯ ವರ್ಗದ ಬದಲು ಹಿಂದುಳಿದ ವರ್ಗಕ್ಕೆ ಮಣೆ ಹಾಕಲಾಗಿದೆಯೆಂಬ ಅಭಿಪ್ರಾಯ ನಾಗರಿಕರಲ್ಲಿದೆ.
ಈ ಹಿಂದೆ ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್ ಹಾಗೂ ಬಿಸಿಎಂ(ಎ) ಸಾಮಾನ್ಯಕ್ಕೆ ಉಪ ಮೇಯರ್ ನಿಗದಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡುವ ಮೂಲಕ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಯತ್ನ ಎದ್ದು ಕಾಣುತ್ತಿದೆ.
ಯಾರು ಹಿತವರು ಈ ನಾಲ್ವರಲಿ:
ಬಿಸಿಎಂ(ಎ) ಮಹಿಳೆಗೆ ಮೇಯರ್ ಸ್ಥಾನ ನಿಗದಿಯಾಗಿದ್ದು, ಬಿಜೆಪಿಯ ಸೌಭಾಗ್ಯ ಮುಕುಂದ, ಸುಶೀಲಮ್ಮ ಮಂಜುನಾಥ್, ಉಮಾ ಪ್ರಕಾಶ್ ಮತ್ತು ನಾಗರತ್ನಮ್ಮನವರಿಗೆ ಅವಕಾಶವಿದೆ. ವರಿಷ್ಠರು ಯಾವ ಸುಳಿವೂ ಬಿಟ್ಟುಕೊಡುವ ಗೋಜಿಗೆ ಹೋಗಿಲ್ಲ.
ಸದ್ಯಕ್ಕೆ ಉಮಾಪ್ರಕಾಶ್, ಸುಶೀಲಮ್ಮ, ಸೌಭಾಗ್ಯ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿವೆ. ಈ ಸದಸ್ಯರು ಹಾಗೂ ಬೆಂಬಲಿಗರು ಕಳೆದ ವಾರದಿಂದ ವರಿಷ್ಠರನ್ನು ಬೆಂಬತ್ತಿತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಉಪ್ಪಾರ ಜನಾಂಗಕ್ಕೆ ಉಪ ಮೇಯರ್ ಸ್ಥಾನ ನೀಡಿರುವುದರಿಂದ ಉಮಾ ಪ್ರಕಾಶ್ ಬದಲಿಗೆ ಸೌಭಾಗ್ಯ ಅಥವಾ ಸುಶೀಲಮ್ಮಗೆ ಮಣೆ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ವಿಧಾನಸಭೆ ನಗರ ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಬಲ ಪಡಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾದರೆ ಸುಶೀಲಮ್ಮಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚು.
ಉಪ ಮೇಯರ್:
ಸಾಮಾನ್ಯ ಮೀಸಲು ನಿಗದಿಯಾದ ಉಪ ಮೇಯರ್ ಸ್ಥಾನಕ್ಕೆ ೨೩ ಸದಸ್ಯರಿಗೂ ಅವಕಾಶವಿದೆ. ಮುಂದಿನ ವರ್ಷ ಮೇಯರ್ ಸ್ಥಾನ ಸಾಮಾನ್ಯಕ್ಕೆ ಮೀಸಲಾಗುವ ಲೆಕ್ಕಾಚಾರದಲ್ಲಿ ಕೆಲ ಸದಸ್ಯರಿಗೆ ಉಪ ಮೇಯರ್ ಸ್ಥಾನ ಆಕರ್ಷಣೀಯವಾಗಿ ಕಾಣುತ್ತಿಲ್ಲ. ಆದರೂ, ಸ್ಪರ್ಧೆಯಲ್ಲಿ ಆರು ಮಂದಿಯಿದ್ದಾರೆ. ಮಹೇಶ್ ರಾಯಚೂರು, ಅವರಗೆರೆ ಸುರೇಶ್, ರುದ್ರಮುನಿಸ್ವಾಮಿ, ಸಂಕೋಳ್ ಚಂದ್ರಶೇಖರ್, ಜ್ಯೋತಿ ಸಿದ್ದೇಶ್, ಸುಧಾ ಜಯರುದ್ರೇಶ್ ಕಣದಲ್ಲಿದ್ದಾರೆ.
ಬಿ. ಲೋಕೇಶ್, ಶಿವಕುಮಾರ್, ಎಂ.ಜಿ. ಬಕ್ಕೇಶ್ ವರಿಷ್ಠರು ನೀಡುವ ಜವಾಬ್ದಾರಿ ಒಪ್ಪಿಕೊಳ್ಳುವುದಾಗಿ ಹೇಳುತ್ತಿದ್ದಾರೆ.
Subscribe to:
Post Comments (Atom)
0 comments:
Post a Comment