ವಿಕ ಕಚೇರಿಯಲ್ಲಿ ಅಗ್ನಿ ಪರೀಕ್ಷೆ
ಚಿತ್ರದುರ್ಗ: ಬೇಸಿಗೆಯ ದಿನಗಳು ಅಗ್ನಿಶಾಮಕ ಸಿಬ್ಬಂದಿ ಹಾಗೂ ಜನರಿಗೆ ಅಗ್ನಿ ಪರೀಕ್ಷೆಯ ಸಮಯ. ಆಗ ಅಗ್ನಿಯ ರುದ್ರ ನರ್ತನ ತಡೆಯಲು ಮುಂದಾಗದಿದ್ದರೆ ಭರಿಸಲಾಗದ ಹಾನಿ ಖಚಿತ. ಈ ಕುರಿತು ಅರಿವು ಮೂಡಿಸುವಲ್ಲಿ ಶುಕ್ರವಾರ ‘ಹಲೋ ವಿಕ ’ ಫೋನ್ ಇನ್ ಮೂಲಕ ವಿಜಯ ಕರ್ನಾಟಕ ವೇದಿಕೆಯಾಯಿತು.
ಟಿವಿ ವಾಹಿನಿಗಳು ಹಾಗೂ ಆಕಾಶವಾಣಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ತಮ್ಮ ನೆಚ್ಚಿನ ಪತ್ರಿಕೆ ಅಂಥ ಸದವಕಾಶ ಒದಗಿಸಿಕೊಟ್ಟದ್ದು, ಮನೆ ಬಾಗಿಲಿಗೇ ಪರಿಹಾರ ತೆಗೆದುಕೊಂಡು ಹೋದಂತಾಗಿತ್ತು. ಬೆಳಗ್ಗೆ ೧೦ ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಎಡೆಬಿಡದೆ ದಾವಣಗೆರೆ ಹಾಗೂ ಚಿತ್ರದುರ್ಗ ಓದುಗರು ಅಗ್ನಿ ಪರೀಕ್ಷೆಗೆ ಒಳಪಟ್ಟು ಜ್ಞಾನೋದಯ ಮಾಡಿಕೊಂಡರು.
ಅಗ್ನಿ ಅನಾಹುತ ಸಂಭವಿಸಿದಾಗ ನಡೆದುಕೊಳ್ಳಬೇಕಾದ ರೀತಿ ಹಾಗೂ ಅದಕ್ಕೂ ಮೊದಲೇ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ದಾವಣಗೆರೆ ಪ್ರಾದೇಶಿಕ ಅಗ್ನಿಶಾಮಕ ಅಕಾರಿ ವೈ.ಎ.ಕೌಸರ್ ತಿಳಿವಳಿಕೆ ನೀಡಿದರು. ಜತೆಯಲ್ಲಿ ಕಿರಿಯ ಅಗ್ನಿಶಾಮಕ ಅಕಾರಿ ಶಶಿಧರ್ ಎಸ್.ಎನ್. ಕೂಡ ಹಾಜರಿದ್ದರು. ಅಗ್ನಿ ದುರಂತ ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿ ಕಾರ್ಯವೈಖರಿ, ಜನರ ಸಹಭಾಗಿತ್ವ, ಇಲಾಖೆ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಮತ್ತಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.
ತಮ್ಮ ಇಲಾಖೆಯು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಾಗಿ ಹೊಸ ರೂಪ ಪಡೆದ ನಂತರ ಸಮಾಜಕ್ಕೆ ಇನ್ನೂ ಹತ್ತಿರವಾಗಿದೆ ಎಂದ ಕೌಸರ್, ಹೊಸ ಕರ್ತವ್ಯ ಹಾಗೂ ಹೊಣೆಗಾರಿಕೆಗಳನ್ನು ವಿವರಿಸಿದರು.
ಈ ಹಿಂದೆ ಅಗ್ನಿ ದುರಂತಗಳು ಸಂಭವಿಸಿದಾಗ ಮಾತ್ರ ಅಗ್ನಿಶಾಮಕ ಇಲಾಖೆ ಕಾರ್ಯೋನ್ಮುಖವಾಗುತ್ತಿತ್ತು. ಈಗ ನೈಸರ್ಗಿಕ ವಿಕೋಪಗಳು, ಯಾವುದೇ ರೀತಿಯ ಅಪಘಾತಗಳು ಘಟಿಸಿದಾಗಲೂ ಇಲಾಖೆ ತುರ್ತು ಸೇವೆ ಒದಗಿಸಲು ಧಾವಿಸುತ್ತದೆ. ಅಂದರೆ ಯಾವುದೇ ಸಂದರ್ಭವಿರಲಿ, ಜೀವ ಹಾಗೂ ಆಸ್ತಿಪಾಸ್ತಿ ರಕ್ಷಣಾ ಕಾರ್ಯ ಇಲಾಖೆ ಸುರ್ಪದಿಗೆ ಸೇರಿದೆ. ಅದಕ್ಕಾಗಿ ಇಲಾಖೆಗೆ ಅತ್ಯಾಧುನಿಕ ಸಲಕರಣೆ ಹೊಂದಿದ ವಾಹನಗಳನ್ನು ನೀಡಲಾಗಿದೆ. ಹಾಗಾಗಿ ಅಗ್ನಿ ಅನಾಹುತಗಳಲ್ಲದೆ, ಯಾವುದೇ ರೀತಿಯ ಆಕಸ್ಮಿಕಗಳಲ್ಲಿ ಸಾಮಾನ್ಯರು ಕಂಡುಕೊಳ್ಳಲಾಗದ ಪರಿಹಾರಕ್ಕೆ ಇಲಾಖೆಯ ಮೊರೆ ಹೋಗಬಹುದು.

0 comments:

Post a Comment